ಮಿಸ್ ಮಾಡಿಕೊಳ್ಳಲಾಗದ ಮಿಸ್ ಸದಾರಮೆ
ಸಮಷ್ಠಿ ತಂಡವು ಪ್ರದರ್ಶನ ಮಾಡುತ್ತಾ ಬಂದಿರುವ ಮಿಸ್ ಸದಾರಮೆ ನಾಟಕದ 55ನೇ ಪ್ರದರ್ಶನವು ನಿನ್ನೆ ದಿನಾಂಕ 12/06/2024 ಬುಧವಾರದಂದು ರಂಗಶಂಕರದಲ್ಲಿ ಸಂಪನ್ನಗೊಂಡಿತು.
ಮಂಜುನಾಥ ಎಲ್. ಬಡಿಗೇರ್ ಇವರು ನಿರ್ದೇಶ ಮಾಡಿರುವ ಈ ನಾಟಕ ಸಮಸ್ಠಿ ತಂಡದ ಯಶಸ್ವಿ ನಾಟಕಗಳಲ್ಲಿ ಮೇಲ್ ತುದಿಯ ಮೆಟ್ಟಿಲಲ್ಲಿ ನಿಂತಿರುವ ನಾಟಕ.
2007 ರಲ್ಲಿ ಈನಾಟಕ ಆರಂಭಗೊಂಡಿದ್ದು. ಈಗ ಈ ಕೂಸಿಗೆ ಹದಿನೇಳರ ಹರೆಯ. ಈ ಹದೀ ಪ್ರಾಯದ ನಾಟಕದ ವಿಶೇಷತೆ ಅಂದರೆ, ಕಳೆದ ಹದಿನೇಳು ವರ್ಷಗಳಲ್ಲಿ ಇಡೀ ತಂಡಕ್ಕೆ ತಂಡ ತನ್ನ ಕಲಾವಿದರನ್ನು ಹೆಚ್ಚು ಕಮ್ಮಿ ಬದಲಿಸದೇ ಹಾಗೇ ಉಳಿಸಿಕೊಂಡಿದೆ. ಇದು ಈ ತಂಡವೆಂಬೆ ಕುಟುಂಬದ ಯಜಮಾನರಾದ ರವೀಂದ್ರ ಪೂಜಾರಿಯವರ ಸಂಘಟನಾ ಶಕ್ತಿಯ ಗೆಲುವನ್ನು ತೋರಿಸಿಕೊಡುತ್ತದೆ.
ಅಂದು ಹದಿನೇಳರ ಪ್ರಾಯದ ಹುಡುಗಿ ಕೃತಿ ಬಿ ಶೆಟ್ಟಿ ಮಿಸ್ ಸದಾರಮೆಯ ಪಾತ್ರವನ್ನು ಮಾಡುವುಕ್ಕೆ ಆರಂಭಿಸಿದವರು. ಇವತ್ತು ಹದಿನೇಳಕ್ಕೆ ಹದಿನೇಳು ಸೇರಿದ ಶ್ರೀಮತೀ ಮಿಸ್ ಸದಾರಮೆ ಆದರೂ ಇನ್ನೂ ಹದಿನೆರಂಟಕ್ಕೆ ಕಾಲಿಡದ ಹದಿನೇಳರ ಸದಾರಮೆ.
ಕಳೆದ ಈ ಹದಿನೇಳು ವರ್ಷಗಳಲ್ಲಿ ನಾನೇ ಇದನ್ನು ಕಡಿಮೆ ಅಂದರೂ ಒಂದು ಹದಿನಾರು ಸಲ ನೋಡಿದ್ದೇನೆ.
ಆದರೆ ನಿನ್ನೆ ನಡೆದ ನಾಟಕ ನಾನು ಇಷ್ಟರವರೆಗೆ ನೋಡಿದ ನಾಟಕಗಳಲ್ಲೇ ಅತ್ಯುತ್ತಮ ಪ್ರದರ್ಶನ.
ಹಾಗಂತ ಕಳೆದ ಹದಿನೈದು ಬಾರಿಯೂ ಇದೇ ಭಾವದ ಚಿಗುರೊಂದು ಹುಟ್ಟಿದ್ದಿದೆ.
ಅದು ಈ ತಂಡದ ಕಲಾವಿದರ ಗೆಲುವು.
ಒಂದು ಪ್ರದರ್ಶನಕ್ಕೆ ಕಡಿಮೆ ಅಂದರೂ ಒಂದು ಐದು ಸಲ ಅಭ್ಯಾಸ ಮಾಡಿರಬಹುದಾದ ಈ ತಂಡ ತನ್ನ 55ನೇ ಪ್ರದರ್ಶನದವರೆಗೆ ಬಂದು ತಲುಪಿರುವಾಗ ಎಷ್ಟು ಸಲ ಅಭ್ಯಾಸ ಮಾಡಿರಬೇಕು ಲೆಕ್ಕ ಹಾಕಿ. ಅಷ್ಟು ಸಲ ಅಭ್ಯಾಸ ಮಾಡುವಾಗ ಒಬ್ಬ ಕಲಾವಿದನಲ್ಲಿ ಕಲಾಸಾಮರ್ಥ್ಯದ ಪ್ರಬುದ್ಧತೆ ಅರಳುತ್ತಾ ಸಾಗುಯವ ಎತ್ತರವನ್ನು ನೆನೆದು ಹೆಮ್ಮೆಯಾಗುತ್ತದೆ.
ಬದುಕಿನಲ್ಲಿ ಒಮ್ಮೆ ಘಟಿಸಿದ ಶುಭವೊಂದು ಅದು ಮತ್ತೊಮ್ಮೆ ಘಟಿಸಿದರೆ ಚಂದವೆಂದು ಕಾಯುತ್ತಲೇ ಇರುತ್ತೇವೆ. ಆದರೆ ಈ ಅಭ್ಯಾಸ ಕ್ರಮದಲ್ಲೊಂದು ಶುಭದ ಸುಖವೊಂದು ಸಿಕ್ಕರೆ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವುದು ಒಂದು ಯೋಗವೇ ಸರಿ.
ಈ ಯೋಗ ಸಿಕ್ಕಿರುವ ಈ ತಂಡದ ಕಲಾವಿದರೆಲ್ಲರಿಗೂ ಗೌರವದ ನಮಸ್ಕಾರಗಳು.
ಮತ್ತೆ ಈ ಮಿಸ್ ಸದಾರಮೆ ತನ್ನ 56 ನೇ ಪ್ರದರ್ಶನದ ದರ್ಶನ ಕೊಡುವ ದಿನಕ್ಕಾಗಿ ಕಾಯುತ್ತಿರುತ್ತೇನೆ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
13/06/2024.
No comments:
Post a Comment